Tuesday, June 15, 2010

ಸುಜಿತಾ ( ಬೊಂಬೆ ಹೇಳಿದ ಕಥೆ )

ನಾನು ಬೆಂಗಳೂರಿನಿಂದ ಹೊರಟಾಗ ಆಗಲೇ ಸಂಜೆಯಾಗಿತ್ತು. ಹೋಗುತ್ತಿರುವುದು ಇಲ್ಲೇ ಪಕ್ಕದ ರಾಜ್ಯದಲ್ಲಿರುವ ಶಬರಿಮಲೆಗಾದರೂ ಮನೆಯವರು ಕಾರು ಹೊರಡುವಾಗ ಹುಶಾರಾಗಿ ಡ್ರೈವ್ ಮಾಡಿ ( ಎಂದು ಇಪ್ಪತ್ತು ಸಾರಿ), ಹೋಗಿ ತಲುಪಿದ ತಕ್ಷಣ ಮರೆಯದೆ ಫೋನ್ ಮಾಡು ( ಎಂದು 18 ಸಾರಿ )ಅಂತಾ ಹೇಳಿದ್ದು ಕೇಳುತ್ತಿದ್ದರೆ ನಗು ಬರುತ್ತಿತ್ತು. ಆದರೂ ಅವರು ಹೇಳಿದ್ದಕ್ಕೆಲ್ಲಾ ಹೂ ಗುಟ್ಟಿ ಅಲ್ಲಿಂದ ಹೊರಟು ನಂಜನಗೂಡು ತಲುಪಿ, ಅಲ್ಲಿಂದ ಸುಲ್ತಾನ್ ಬತ್ತೇರಿಯ ಗಡಿ ದಾಟಿದಾಗ 9 ಘಂಟೆ. 2 ದಿನದಿಂದ ನಿದ್ರೆಯಿಲ್ಲದಿದ್ದಕ್ಕೋ ಏನೋ ಕಣ್ಣು ಎಳೆಯುತ್ತಿತ್ತು. ನಮ್ಮ ಹುಡುಗರ ಗಾಢ ನಿದ್ರೆ ನೋಡಿದರೆ ಎಬ್ಬಿಸಲು ಮನಸು ಬರಲಿಲ್ಲ. ಸಮಯ ಒಂದು ಘಂಟೆ ಆದಾಗ ಮಾತ್ರ ಇನ್ನು ತಾಳಲಾರೆ ಎಂಬಂತೆ ಚಹಾ ಕುಡಿಯೋಣವೆಂದು ಕಾರು ನಿಲ್ಲಿಸಿದೆ.
ಚಹಾ ಕುಡಿಯುತ್ತಿದ್ದ ಹಾಗೆ ಕಾರು ನಿಂತಿದ್ದಕ್ಕೋ ಎನೋ, ಗೆಳೆಯರೆಲ್ಲಾ ಒಬ್ಬೊಬ್ಬರಾಗಿ ಏಳಲು ಶುರು ಮಾಡಿದರು. ಶಿವು ನನ್ನ ಹತ್ತಿರ ಬಂದು " ನೀವಿನ್ನಿ ಮಲಗಿ ಚಂದ್ರು ಸ್ವಾಮಿ, ನನಗೆ ಒಳ್ಳೆ ನಿದ್ದೆ ಆಗಿದೆ , ಇನ್ನು ನಾನೇ ಓಡಿಸ್ತೇನೆ. ಎಂದಾಗ ನನಗೆ ಪರಮಾನಂದ. ಆವಾಗಲೂ ಶಿವುಗೆ , ಶಿವು ದಯವಿಟ್ಟು ಭಕ್ತಿನಾ ಮನಸ್ಸಿನಲ್ಲಿ ಇಟ್ಟಿಕೋ, ನನಗೆ ಮಾತು ಮಾತಿಗೆ ಸ್ವಾಮಿ ಅಂತ ಕರೆದ್ರೆ, ಇರಿಟೇಟ್ ಆಗುತ್ತೆ ಎಂದೆ. ತಕ್ಷಣ ಶಿವು ಜಾಗ್ರತನಾಗಿ " ಅದು ಹಾಗಲ್ಲ ಸ್ವಾಮಿ" ಎಂದು ಏನು ದೊಡ್ಡ ಕ್ಲಾರಿಫಿಕೇಶನ್ ಕೊಡಲು ಹೋದವನು, ನನ್ನ ಕೆಂಪಾದ ಕಣ್ಣು ನೋಡಿ, ನನ್ನೊಡನೆ ವಾದ ಮಾಡುವ ವ್ಯರ್ಥ ಪ್ರಯತ್ನಕ್ಕೆ ತಡೆ ಹಾಕಿದ. ಚಹಾ ಕುಡಿದವನೇ ಹೋಗಿ ಹಿಂದಿನ ಸೀಟಿನಲ್ಲಿ ಒರಗಿದರೆ ಹತ್ತೇ ನಿಮಿಷಕ್ಕೆ ಗಾಢ ನಿದ್ರೆ.
ಏನೇನೋ ವಿಚಿತ್ರ ಕನಸುಗಳ ಸಂತೆ. ಗಾಡಿಯ ಓಲಾಟ. ನಮ್ಮ ಹುಡುಗರಿಗೆ ಒಂದು ಭರ್ಜರಿ ನಿದ್ರೆ ಮುಗಿದಿದ್ದರಿಂದ ಬೇಡ ಬೇಡವೆಂದರೂ ಕೇಳುವ ಅವರ ಗಟ್ಟಿ ದನಿಯ ಹರಟೆ. ಇದೆಲ್ಲವುಗಳ ಮಧ್ಯೆ ನಿದ್ದೆ ಯಾವಗ ಬಂತೋ ತಿಳಿಯಲಿಲ್ಲ.

"ಗುರೂ ಟೀ ಕುಡಿಯೋಣ ನಿಲ್ಲಿಸ್ತೀಯಾ ಗುರು"
" ದಿಸಕ್ಕೆ ಎಷ್ಟು ಸಾರಿ ಟೀ ಕುಡಿತಿಯಾ ಸ್ವಾಮಿ"
" ಇಲ್ಲಪ್ಪಾ ಯಾಕೋ ನಿದ್ದೆ ಬರುವ ಹಾಗಾಗ್ತಾ ಇತ್ತು ಅದಕ್ಕೆ ಕೇಳಿದೆ ಅಷ್ಟೇ"
" ಸರಿ ಸ್ವಾಮಿ ಮುಂದೆ ಯಾವ್ದಾದ್ರೂ ಅಂಗಡಿ ಕಂಡ್ರೆ ಗಾಡಿ ಲೆಫ್ಟೀಗಾಕ್ಕೋತೀನಿ"
" ಸರಿ ಸ್ವಾಮಿ "

ಗಾಡಿ ಬಹುಶಃ ನಿಂತಿರಬೇಕು. ಮತ್ತೆ ಸಂಭಾಷಣೆ ಶುರುವಾಯಿತು
"ಸಾರ್, ಇಲ್ಲಿಂದ ಗುರುವಾಯೂರ್ ಎಷ್ಟು ದೂರ? "
" ಎನ್ನಾ"
" ಗುರುವಾಯೂರ್ ನೂತಿ ಎತ್ತರಿ ಕೀಲೋ ಮೀಟರ್ ಇರಿಕಿದಿ
" ಗುರುವಾಯೂರಾ, ನೀಂಗೆ ನೇರಾ ಪೋಣಾ.ನೂತಿ ಅಂಬದಿ ಕೀಲೋ ಮೀಟರಾ "
" ಸರಿ ಥ್ಯಾಂಕ್ಸ ಸ್ವಾಮಿ"
" ......................."

ಯಾಕೋ ನಿದ್ರೆ ಬಾರದು ಎನ್ನಿಸಿತು. ಹಾಗಂತ ಸಂಪೂರ್ಣ ಎಚ್ಚರವೂ ಆಗದ ಸ್ಥಿತಿ . ಮಲಗಿದಲ್ಲೇ ಎಲ್ಲಿದ್ದೇವೆಂದು ತಿಳಿಯುವ ಪ್ರಯತ್ನ ಮಾಡಿದೆ. ಯಾವುದು ಹಳೆಯ ಹೆಂಚಿನ ಮನೆಯ ಮುಂದೆ ಕಾರು ನಿಲ್ಲಿಸಿ ಹುಡುಗರೆಲ್ಲಾ ಹೊರಗೆ ಹೋಗಿದ್ದರು. ಆ ಮನೆ ಸಂಪೂರ್ಣ ಕುಸಿಯುವ ಹಂತ ತಲುಪಿದ್ದ ಹಳೇ ಮನೆ. ಅದರ ಹಿನ್ನಲೆಯಲ್ಲಿ ಅಸ್ಪಷ್ಟವಾಗಿ ಕಾಣುವ ಅಡಿಕೆ ಮರಗಳು. ಅಷ್ಟರಲ್ಲೇ ಅಪ್ರಯತ್ನಪೂರ್ವಕವಾಗಿ ನನ್ನ ಕಣ್ಣುಗಳು ಆ ಮನೆಯ ಮಾಡಿನತ್ತ ಹೊರಟಿತು. ಅಲ್ಲಿ ಎರಡು ಸಣ್ಣ ಸಣ್ಣ ಗೊಂಬೆಗಳನ್ನು ನೇತು ಹಾಕಿದ್ದಾರೆ ಗೊಂಬೆಗಳು ಚೆನ್ನಾಗಿದ್ದರೂ, ಅವು ತುಂಬಾ ಹಳೆಯದ್ದಾದ್ದರಿಂದ ತಮ್ಮ ಬಣ್ಣ, ರೂಪ ಕಳೆದುಕೊಂಡು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಆ ಚವತಿಯ ಬೆಳದಿಂಗಳ ಹಿನ್ನಲೆಯಲ್ಲೆ ಯಾಕೋ ಏನೋ ಆ ಗೊಂಬೆಗಳು ನನ್ನತ್ತಲೇ ನೋಡುತ್ತಿರುವಂತೆ ಭಾಸವಾಗುತ್ತಿದೆ. ಇದು ಸ್ವಪ್ನವೋ, ನನ್ನ ಭ್ರಮೆಯೋ ತಿಳಿಯುತ್ತಿಲ್ಲ. ಮತ್ತೆ ಕಣ್ಣು ಮುಚ್ಚಿದೆ ಅನ್ನಿಸುತ್ತೆ . ಮತ್ತೆ ನಿದ್ರೆ

" ಟೀ ಸಕತ್ತಾಗಿತ್ತಲ್ವಾ ಸ್ವಾಮಿ "
" ಆ ಆ ಆ ಆ ಆ ಆ ಆ ಆ "
" ಹೂ ಗುರೂ, ಈ ಕೇರಳದಲ್ಲೆಲ್ಲಾ ಟೀ ಸೂಪರ್ರಾಗಿ ಮಾಡ್ತಾರೆ "
" ಏಯ್ ಏಯ್ '
" ಹೌದು ಗುರು, ನೀರಿನ ಬಾಟ್ಲು ತಗೋಂಡ್ರಿ ತಾನೇ ? "
" ಎನ್ನಾ" ( ಏನು )
" ಅವಡೆ ನೋಕ್ಕ ಆ ಶರಕನ್ನೆ " ( ಅಲ್ಲಿ ನೋಡು ಆ ಹುಡುಗನ್ನಾ)
" ತಗೋಂಡ್ಬುಟ್ಟೆ, ಮತ್ತೆ ಯಾವಾಗ್ ಅಂಗಡಿ ಸಿಗುತ್ತೋ ಏನೋ"
" ಎಂಡ ಶರಕಾ ( ಯಾವ ಹುಡುಗಾ) "

ಮಾತನಾಡುತ್ತಿರುವುದು ಬೊಂಬೆಗಳೋ ಅಥವಾ ನಮ್ಮ ಹುಡುಗರೋ, ಯಾವುದೂ ತಿಳಿಯಲಾಗದ ವಿಚಿತ್ರ ಸ್ಥಿತಿ. ಯಾಕೋ ಉಸಿರು ಕಟ್ಟಿದ ಹಾಗಾಗುತ್ತಿದೆ, ಕಣ್ಣ ಮುಂದೆ ಆ ಬೊಂಬೆಗಳು ಕುಣಿಯುತ್ತಿದೆ.ಕೂಗಬೇಕು ಅನ್ನಿಸಿದರೂ ಬಾಯಿ ತೆರೆಯಲಾಗುತ್ತಿಲ್ಲ. ಕತ್ತನ್ನು ಯಾರೋ ಅದುಮಿದ ಅನುಭವ.
ಕಣ್ಣ ಮುಂದೆ ಎರಡು ಬೊಂಬೆಗಳು ಬಂದು ನಿಂತ ಹಾಗಾಯಿತು. ಈಗ ಆ ಬೊಂಬೆಗಳು ಹಳತಾಗಿರಲಿಲ್ಲ. ಈಗಷ್ಟೇ ತಯಾರಿಸಿದ ಹೊಚ್ಚ ಹೊಸ ಬೊಂಬೆಗಳ ಹಾಗಿದೆ. ಜರಿಯ ಪಂಚೆ. ಕೆಂಪು ಅಂಗಿ. ತಲೆಗೆ ರುಮಾಲು ಧರಿಸಿರುವ ಗಂಡು ಬೊಂಬೆ, ಜರಿ ಸೀರಿ ಉಟ್ಟು. ಸರ್ವಾಲಂಕಾರ ಭೂಷಿತವಾದ ಒಂದು ಹೆಣ್ಣು ಬೊಂಬೆ. ಎರಡೂ ಬೊಂಬೆಗಳು ತಮ್ಮೊಳಗೆ ಮಾತನಾಡುತ್ತಿವೆ. ಅವು ಮಾತನಾಡುತ್ತಿರುವುದು. ಮಲಯಾಳಂನಲ್ಲಿ , ಅದೂ ಶುದ್ದವಾದ ನಾಡ ಭಾಷೆ. ನನಗೆ ಮಲಯಾಳಂ ನ ಗಂಧ ಗೊತ್ತಿಲ್ಲ. ಆದರೆ ಆ ಬೊಂಬೆಗಳು ಮಾತನಾಡುತ್ತಿರುವುದು ಅರ್ಥವಾಗುತ್ತಿದೆ. ಯಾವುದೋ ದ್ವಂದ್ವಗಳ ಸುಳಿಯಲ್ಲಿ ಮನಸ್ಸು ಸಿಕ್ಕಿ ಗಿರಗಿರನೆ ತಿರುಗುತ್ತಿದೆ.

" ನಮ್ಮ ಮನೆಗೆ ಬಂದ ಹೊಸ ಸೊಸೆಯನ್ನ ನೋಡಿದ್ಯಾ"
" ಒಳ್ಳೆ ಅಪ್ಸರೆ ಹಾಗಿದಾಳೆ"
" ಅವಳ ಕೂದ್ಲು ನೋಡಿದ್ಯಾ"
" ಅಯ್ಯೋ, ಆ ಹುಡುಗ ಅವಳ ನಾಲ್ಕಡಿ ಉದ್ದ ಕೂದಲು ನೋಡಿಯೇ ಮರುಳಾಗಿದ್ದಂತೆ, ನಾನು ಅದರಲ್ಲಿ ನೇಣು ಹಾಕಿಕೊಂಡರು ನನಗೆ ಆನಂದವಾಗುತ್ತೆ ಅಂತಾ ಮೊನ್ನೆ ಯಾರ ಹತ್ರಾನೋ ಮಾತಾಡ್ತಾ ಇದ್ದ "
" ಅವಳ ಬಣ್ಣ ನೋಡು "
" ಅಹಾಹಾ , ಒಳ್ಳಿ ಪುಟವಿಟ್ಟ ಬಂಗಾರ ಹಾಗಿದೆ"
" ಏಯ್, ನೀನೇನು ನನ್ನ ಗಂಡಾನೋ ಅಥವಾ ಆ ಹುಡುಗಿ ಪ್ರಿಯಕರಾನೋ, ಒಳ್ಳೆ ಕವಿಯಂತೆ ಆ ಹುಡುಗಿನಾ ವರ್ಣನೆ ಮಾಡ್ತಾಯಿದ್ಯಾ?"
" ನನಗೆಲ್ಲಿದೆ, ಆ ಪುಣ್ಯ, ಆ ಹುಡುಗ ಒಳ್ಳೆ ರಾಜಕುಮಾರ ಇದ್ದ ಹಾಗಿದ್ದಾನೆ, ನಾನೋ ಇರೋದೆ ಮುಕ್ಕಾಲಡಿ, ಅದಕ್ಕೆ ನಿನ್ನಂಥಾ ಮಾಯಾಂಗನೆ ಕೈಲಿ ಸಿಕ್ಕಿ ಸಾಯ್ತಾ ಇದ್ದೀನಿ"
ಢಂ ಢಕ್ಕುಂ ಢಂ ಢಕ್ಕುಂ ಡಢಡ ಢಕ್ಕುಂ
" ಸರಿ ಬಾಯ್ಮಚ್ಚು, ಮದುವೆ ದಿಬ್ಬಣ ಬಂತು ಅನ್ಸುತ್ತೆ, ನೀನಿರೋ ಅಂದಕ್ಕೆ ನಾನು ಸಿಕ್ಕಿರೋದೇ ಹೆಚ್ಚು"

===========================================================

" ಏನು ಹುಡುಗ್ರೋ ಎನೋಪ್ಪಾ, ಮದುವೆಯಾಗಿ ಮೂರು ತಿಂಗಳಾಯ್ತು, ಆದರೂ ಅವಳ ಸೆರಗು ಹಿಡಿದುಕೊಂಡೇ ತಿರಗ್ತಾ ಇರ್ತಾನೆ"
" ಅವಳೇನು ಕಡಿಮೇನಾ? ಅವನು ಮನೆಗೆ ಬರೋದೆ ಸಾಕು, ಇವಳ ಮುಖ ಅರಳಿದ ಹೂವಿನಂಗೆ ಆಗುತ್ತೆ "
" ಈ ಪ್ರೀತಿ ಮಾಡೋರಿಗೆ, ಪ್ರೀತ್ಸಿ ಪ್ರೀತ್ಸಿ ಬೇಜಾರಾಗಲ್ವಾ ಗಂಡೇ? "
" ಪ್ರೀತ್ಸಿದ ಕೂಡ್ಲೇ ಬೇಜಾರಾಗೋದಿಕ್ಕೆ , ಹುಡುಗಿ ಏನು ನಿಂತರಾ ಅನ್ಕೊಂಡ್ಯಾ? ಅವಳೂ....................."
" ಸಾಕು, ಸಾಕು , ದಿನಾಗ್ಲೂ ಆ ಹುಡುಗಾ ಹೊಗಳೋದು ಕೇಳೀನೇ ಕಿವಿ ತೂತು ಬಿದ್ದೋಗಿದೆ, ಇದರ ಮಧ್ಯ ನಿಂದು ಬೇರೆ"
"ಗುಣಕ್ಕೆ ಮಾತ್ಸರ್ಯ ಇರಬಾರ್ದು ಕಣೆ. ನೋಡು ನೋಡು, ಎಂಥಾ ಬಂಗಾರದಂಥಾ ಜೋಡೀ"

=====================================================================

" ಯಾಕಿವತ್ತು, ಹುಡುಗಾ ಒಂಥರಾ ಇದ್ದ ? ಮದುವೆ ಆಗಿ ಒಂದು ವರ್ಷದಲ್ಲಿ ಅವ್ನು ಸಪ್ಪಗಿದ್ದಿದ್ದು ಇವತ್ತೇ ನೋಡಿದ್ದು. ಏನಾಯ್ತು? ನಿಂಗೇನಾರೂ ಗೊತ್ತಾಯ್ತ ?
" ಹೂ. ಅಪ್ಪ ಅಮ್ಮ ಇಬ್ರೂ ಮಾತಾಡ್ತಾ ಇದ್ರು"
" ಏನಂತಾ?"
" ಈ ಹುಡುಗಿ ನೀರು ತರಕ್ಕೆ ಹೋದಾಗ, ಈ ಊರಿನ ಪಾಳೇಗಾರನ ಮಗ ಅವಳ್ನ ಕೆಣಕಿದನಂತೆ. ನಿನ್ನ ನೋಡಿ ನನ್ನ ತಲೆ ಕೆಟ್ಟು ಹೋಗಿದೆ. ಆ ಮನೆ ಬಿಟ್ಟು ಬಾ, ನಿನ್ನಾ ರಾಣಿ ಥರಾ ನೋಡ್ಕೋತೀನಿ..................."
" ಸಾಕು, ಸುಮ್ನಿರು. ಅವನಿಗೇನು ಬಂದಿತ್ತು. ಕೇಡುಗಾಲ?. ನೋಡಿದ್ರೆ ಮಹಾಲಕ್ಷ್ಮಿ ಹಾಗಿದಾಳೆ, ಅದ್ರಲ್ಲೂ ಮದ್ವೆ ಆದ ಹುಡುಗಿ ಬೇರೆ"
" ಅಷ್ಟೇ ಅಲ್ಲ, ನೀನು ಒಪ್ಲಿಲ್ಲಾಂದ್ರೆ ನಿನ್ನ ಗಂಡಂಗೆ ಒಂದು ಗತಿ ಕಾಣಸ್ತೀನಿ ಅಂತ ಹೇಳಿದ್ನಂತೆ. ಪಾಪ ಆ ಹುಡುಗಿ ಅವರತ್ತೆ ಹತ್ರ ಹೇಳಿ ಕಣ್ಣೀರು ಹಾಕ್ಕೋತಾ ಇತ್ತು"
" ಹುಡುಗಾ ಸುಮ್ನಿದ್ನಾ? "
" ಸುಮ್ನಿದ್ದಾನಾ ಅವನು ? ತಕ್ಷಣ ಬಿಚ್ಚು ಗತ್ತಿ ತಗೊಂಡು, ಕುದುರೆ ಏರೋದಕ್ಕೆ ಹೋಗಿದ್ದ ?
" ಆಮೇಲೆ?"
" ಅವರಪ್ಪ ಅಮ್ಮ ಬಂದು , ಬೇಡ ಮಗೂ ನಮಗ್ಯಾಕೆ ದೊಡ್ಡೋರ ಸಹವಾಸ, ಇನ್ನು ಮೇಲೆ ಸ್ವಲ್ಪ ದಿನ ಅವಳನ್ನ ಹೊರಗಡೆ ಕಳಿಸೋದು ಬೇಡ ಅಂತ ಸಮಾಧಾನ ಮಾಡಿದ್ರು, ಊರ ಹಿರಿಯರೂ ಹಾಗೇ ಹೇಳಿದ್ರು "

===================================================================================

ಕಟ್ ಕಟ್, ದಡಾಕ್ ದಡಾಕ್, ಕಟ್ ಕಟ್
" ಎಲೇ ಹರುಕು ಬಾಯೋಳೇ, ಏನೆ ಅದು ರಾತ್ರಿಯೆಲ್ಲಾ ಹಲ್ಲು ಕಡಿತಾ ಇದ್ದಿಯಾ?
" ಅಯ್ಯೋ ಗಂಡ್ಸೇ, ಸ್ವಲ್ಪ ಎದ್ಧು ನೋಡು ಅಲ್ಲಿ, ಅದು ನಾನು ಹಲ್ಲು ಕಡೀತಾ ಇರೋ ಸದ್ದಲ್ಲಾ. ಇಂಥಾ ಅಪರರಾತ್ರಿಯಲ್ಲಿ ಯಾರೋ ಬಂದು, ಮನೆ ಮುಂದೆ ಅಗೀತಾ ಇದ್ದಾರೆ."
"ಹೌದು, ಆ ನಗ್ನವಾಗಿದ್ದಾನಲ್ಲ. ಅವನ ಕೈಲಿರೋದೇನು, ಆ ಮಡಿಕೆ ಥರಾ ಇದಿಯಲ್ಲಾ "
" ಅಲ್ನೋಡು. ಇನ್ನೊಬ್ಬ. ಆ ತಗಡಿನ ಥರಾ ಇರೋದನ್ನ ಆ ಗುಂಡಿ ಒಳಗೇ ಹಾಕ್ತಾ ಇದಾನೆ "
" ಅಯ್ಯೋ, ನಾರಯಣಾ ಇದೇನು ಮಾಡ್ತಾ ಇದಾರೆ ಇವ್ರು. ರಾಕ್ಷಸ ಜನ?
" ಇನ್ನು ಈ ಮನೇನ ದೇವ್ರೇ ಕಾಪಾಡಬೇಕು "

==========================================================================

" ಒಳ್ಳೇ ಬಿಚ್ಚಿದ ಕತ್ತಿ ಹಾಗೆ ದಿವಿನಾಗಿದ್ದ ಹುಡುಗ. ಹೇಗೆ ಆಗೋದ ನೋಡು?"
"ದಿನಾಲೂ ರಕ್ತ ರಕ್ತಾನೇ ವಾಂತಿ ಮಾಡ್ಕೋತಾನೇ. ಅನ್ನ ಕಂಡ್ರೆ ಬೆಚ್ಚಿ ಬೀಳ್ತಾನೆ , ಹಾಡು ಹಗಲಲ್ಲೇ ನಾಯಿ ಥರಾ ಊಳಿಡ್ತಾನೆ"
" ಇನ್ನು ಕಾಪಾಡಿದ್ರೆ, ಗುರುವಾಯೂರು ಕೃಷ್ಣನೇ ಕಾಪಾಡಬೇಕು"
" ನನಗೇನೋ ಆ ಹುಡುಗ ಬದುಕುಳೀತಾನೆ ಅಂತಾ ನಂಬಿಕೆ ಇಲ್ಲ "
"ಥೂ, ಬಿಡ್ತು ಅನ್ನು.ತುಂಬಿದ ಮನೇಲಿ ಎಂಥಾ ಮಾತಾಡ್ತಾ ಇದ್ದೀಯ? ಇಲ್ಲಾ ಸರಿ ಹೋಗಿ ಆ ಜೋಡಿ ಮತ್ತೆ ಮೊದಲಿನ ಥರಾ ನಗುನಗುತ್ತಾ ಇದ್ರೆ ಸಾಕು"

======================================================================================

" ಇದೇನಿದು, ಏನೋ ಏಣಿ ಥರ ಇರೋದ್ರ ಮೇಲೆ ಹುಡುಗ್ನ ಮಲಗ್ಸಿದಾರೆ, ಆ ಹೆಣ್ಣುಮಗು ಯಾಕೆ ಹಾಗೆ ಅರಚ್ಕೋತಾ ಇದೆ "
" ಆ ಹುಡುಗನಿಗಿನ್ನು ಭೂಮಿ ಋಣಾ ತೀರಿತು"
" ಆಂ"
" ಹೌದು, ಇನ್ನು ಆ ಹುಡುಗಿ ಜೀವನಾ ಪೂರ್ತಿ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಯ್ತು"
" ಛೇ ಛೇ , ದೇವರು ಎಂಥಾ ನಿರ್ದಯಿ. ಜೊತೆಗೆ ಆ ಹುಡುಗೀನೂ ಕರೆಸ್ಕೊಂಡು ಬಿಟ್ಟಿದ್ರೆ ಚೆನ್ನಾಗಿರೋದು"

============================================================

" ಅರೆರೇ, ಏನಿದು ಮನೆಯೊಳಗೆ ಕಾವಲು ಭಟರೆಲ್ಲ ಈ ರೀತಿ ನುಗ್ಗುತಾ ಇದಾರೆ "
" ಅಲ್ನೋಡು, ಆ ಹುಡುಗಿ ಕೈ ಹಿಡಿದು ಎಳಿತಾ ಇದಾರೆ. ಇನ್ನೂ ಗಂಡ ಸತ್ತು ಒಂದು ಪಕ್ಷವಾಗಿಲ್ಲ. ಇವರೇನು ಮನುಷ್ಯರೋ ಇಲ್ಲ ರಾಕ್ಷಸರೋ"
" ದೇವರೇ, ಅಗೋ ಆ ಹುಡುಗಿ ಕೈಯಲ್ಲಿರುವ ಹರಳು ಬಾಯಿಗೆ ಹಾಕ್ಕೋಳ್ತಾ ಇದಾಳೆ"
" ಅವಳ ಬಾಯಿಂದ ರಕ್ತಾ ಬರುತ್ತಿದೆ"
" ಶಿವನೇ, ಇವಳೂ ನಿನ್ನ ಪಾದ ಸೇರ್ಕೋಂಡ್ಳು ಅನ್ಸುತ್ತೆ"

" ಸುಜಿತಾ...............ನೈನು ನಿಂಡೇ ಒಡನೇ ವರುಂ ( ಸುಜಿತಾ ನಾನು ನಿನ್ನ ಜೊತೆ ಬರ್ತೀನಿ)
" ಅಯ್ಯೋ ವಿಧಿಯೇ, ಈ ಜೋಡಿ ಸ್ವರ್ಗದಲ್ಲಾದರೂ ಸುಖವಾಗಿರಲಿ"

" ಸುಜಿತಾ...............ನೈನು ನಿಂಡೇ ಒಡನೇ ವರುಂ"

" ಆ ಗಾಡಿಯಲ್ಲಿ ಮಲಗಿರೋ ಹುಡುಗನ್ನ ನೋಡು ನಮ್ಮ ಸುಜಿತ್ ಹಾಗೇ ಇಲ್ಲವೇ"

"ಸುಮ್ನಿರು, ಆ ಜೋಡಿ ಸತ್ತು ನೂರಾ ಹದಿನೇಳು ವರ್ಷವಾಯ್ತು"

" ಚಂದ್ರು ಸ್ವಾಮಿ, ಎದ್ದೇಳೀ ಗುರುವಾಯೂರ್ ಬಂತು"
" ಪಾಪ, ಓಳ್ಳೇ ನಿದ್ದೆ ಅನ್ಸುತ್ತೆ ಸ್ವಾಮಿಗಳಿಗೆ "

"ಸುಜಿತಾ...............ನೈನು ನಿಂಡೇ ಒಡನೇ ವರುಂ"

" ಬೇಗ ಎದ್ದೇಳಿ ಸ್ವಾಮಿ, ಇನ್ನೂ ಸ್ನಾನ ಮಾಡ್ಕೋಂಡು ದರ್ಶನಕ್ಕೆ ಹೋಗ್ಬೇಕು"

==================================================================

ಧಡಕ್ಕನೆ ಒಮ್ಮೆ ನಿದ್ರೆಯಿಂದೆ ಎಚ್ಚರವಾಯಿತು. ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಲಲು ಕೆಲವು ನಿಮಿಷಗಳೇ ಬೇಕಾಯಿತು. ಸಮಯ ನೋಡಿಕೊಂಡಿ, ಬೆಳಗಿನ ಜಾವ ನಾಲ್ಕು ಘಂಟೆ.
ಅಂದರೆ ನಾನು ಇಷ್ಟು ಹೊತ್ತು ಕಂಡಿದ್ದು ಕನಸೇ? ಯಾವುದೂ ಅರಿಯುತ್ತಿಲ್ಲ. ತಲೆಯೆಲ್ಲಾ ನೋಯುತ್ತಿತ್ತು. ಮಂಕಾಗಿ ಎದ್ದು ಕಲ್ಯಾಣಿಯ ಕಡೆ ಸಾಗಿದೆ. ಕಲ್ಯಾಣಿಯಲ್ಲಿ ಮುಳುಗುವಾಗ ಸುಜಿತಾ ಎಂಬ ಆರ್ತ ನಾದವೊಂದು ಕೇಳಿದಂತಾಗಿ, ನನ್ನ ಕಣ್ಣಿಂದ ಬಿಸಿ ಹನಿಯೊಂದು ಕೆಳಗುರುಳಿ ಕಲ್ಯಾಣಿಯ ಕೊರೆಯುವ ನೀರಿನಲ್ಲಿ ಒಂದಾಗಿ ಹೋಯ್ತು.

ತತ್ವ ಜ್ನ್ಯಾನಿಯ ಅಳಲು

ನಾನು ತುಂಬಾ ಸಜ್ಜನ ಸಾರ್,ಭಾರೀ ಭಾರೀ ಗ್ರಂಥಗಳೆಲ್ಲಾ
ನಮ್ಮ ಮನೆ ಕಪಾಟಿನ ತುಂಬಾ ಧೂಳು ತಿನ್ನುತ್ತಿದೆ
ಲೆಕ್ಚರು, ಡಾಕ್ಟರು, ಲಾಯರುಗಳು ಮಾತ್ರ ನನ್ನ ಮಿತ್ರರು
ನನ್ನ ವಿದ್ವತ್ಪೂರ್ಣ ಲೇಖನಗಳ ಬಗ್ಗೆ ಏನೆಂದು ಹೇಳಲಿ

ದೇಶದ ಎಲ್ಲಾ ಸಮಸ್ಯೆಗಳನ್ನು ನಾನು ಪರಿಹರಿಸಬಲ್ಲೆ ಸಾರ್
ನಮ್ಮ ಮನೆಯಲ್ ಮಾತ್ರ ಸೊಲ್ಪ ಪ್ರಾಬ್ಲಮ್ಮು
ಎಲ್ಲಾರ್ ಮನೇ ದೋಸೇನೂ ತೂತಲ್ವಾ
ಸಂಸಾರ ಅಂದ್ಮೇಲೆ ಎಲ್ಲಾ ಇದ್ದಿದ್ದೇ ಅಲ್ವಾ

ಕಾರ್ಮಿಕರನ್ನ ಯಾವತ್ತೂ ನಂಬಬೇಡೀ ಸಾರ್
ಭಿಕ್ಷುಕರಂತೂ ಈ ದೇಶದ ಅನಿಷ್ಟ
ಇವರೆಲ್ಲಾ ಸೇರ್ಕೊಂಡು ನಮ್ಮ ದೇಶದ ಹೆಸರನ್ನು
ಇಂಟರ್ ನ್ಯಾಷನಲ್ ಲೆವೆಲ್ಲಲ್ಲಿ ಹಾಳು ಮಾಡ್ತಾ ಇದಾರೆ ಸ್ವಾಮೀ

ಇಂಗ್ಲೀಷೇ ಬೆಸ್ಟು ಸಾರ್, ಈ ಕನ್ನಡ ಪ್ರೇಮ ಎಲ್ಲಾ ಬರೀ ನಾಟಕ
ಯಾವನಿಗೆ ಬೇಕು ಸಾರ್ ಈ ಹಬ್ಬಾ ಹರಿದಿನಾ ಎಲ್ಲಾ
ನಿಜ ಹೇಳ್ತೀನಿ ಕೇಳಿ ಸ್ವಾಮೀ
ಇದೆಲ್ಲಾ ಪುರೋಹಿತಶಾಹಿ ತಂತ್ರ

ನೋಡಿ ಸಾರ್, ಎಂಥಾ ಸಜ್ಜನ ನಾನು ಅಲ್ವಾ, ಆದ್ರೂನೂ
ಹೋದ್ ಕಡೇ ಎಲ್ಲಾ ನನ್ನ ಕೆಟ್ಟ ಕೆಟ್ಟಾ ಮಾತಲ್ಲಿ ಬೈತಾರೆ
ಬೋಳಿಮಗನೆ, ಸೂಳೆ ಮಗನೆ ಅಂದ್ರೂ ಪರವಾಗಿಲ್ಲ್ಲಾ
ಬುದ್ದಿ ಜೀವಿ ಬಂದ್ರು ನೋಡು ಅಂತಾರೆ

ನಾನು ಮತ್ತು ನವಯುಗದ ಬುದ್ದ

ಇಪ್ಪತ್ತೊಂದನೆ ಶತಮಾನ
ಎಲ್ಲೆಡೆ ನವನಾಗರೀಕತೆಯದ್ದೇ
ದರ್ಬಾರು,
ಆದರೂ ಯಾರಿಗೂ ತೃಪ್ತಿಯಿಲ್ಲ
ಏನೊ ಚಡಪಡಿಕೆ , ಏನೋ ತುಡಿತ, ಏನೋ ಹಂಬಲ

ನಾನು ಮತ್ತು ನವಯುಗದ ಬುದ್ದಿ
ಇದು ಅಭಾವ ವೈರಾಗ್ಯವಾಗದಿರಲಿ
ಶಾಂತಿ ಎಂಬುದು ಸುಲಭಸಾಧ್ಯವಾಗದಿದ್ದರೂ
ಕಷ್ಟಸಾಧ್ಯವಾಗಲಿ

ಬುದ್ದಂ ಶರಣಂ ಗಚ್ಚಾಮಿ
ನಮ್ಮ ಸಹಜ ಹಂಬಲ ಜ್ನಾನೋದಯದೆಡೆಗೋ
ಅಥವಾ ಅದರಿಂದ ಸಿಗುವ ಪ್ರತಿಫಲದೆಡೆಗೋ
ಗೊತ್ತಿಲ್ಲ ,ಆದರೆ ಆಸೆಯೇ ದು;ಖಕ್ಕೆ ಮೂಲ
ಗೊತ್ತಲ್ಲ

ನಾನು ಮತ್ತು ಬುದ್ದ
ಪೂರ್ವಾಶ್ರಮದಲ್ಲಿ ಸಿದ್ದಾರ್ಥ ಸ್ವಲ್ಪ ನಾನಾಗಿರಬಹುದು ಹಾಗು
ಸಾಧನೆಯ ಹಾದಿಯಲ್ಲಿ ನಾನು ಸ್ವಲ್ಪ
ಬುದ್ದನಾಗಬಹುದು

ಕಂದಾ ಬೇಡವೋ ಸಿಗರೇಟ್ ಸೇದಬೇಡಾ!

ಬಹುಷಃ ನಮ್ಮಮ್ಮನ ಮೂಡು ಅವತ್ತು ಸರಿ ಇರಲಿಲ್ಲ. ಅದನ್ನು ಅವರು ಬಾಯಿ ಬಿಟ್ಟು ಹೇಳದಿದ್ದರೂ ಅಡಿಗೆ ಮನೆಯಿಂದ ಬರುತ್ತಿದ್ದ, ಡಿಜಿಟಲ್ ಮತ್ತು ಡಬಲ್ ಡಾಲ್ಬಿ ಸೌಂಡು ಎಫೆಕ್ಟಿನಿಂದಲೇ ಕಂಡು ಹಿಡಿಯಬಹುದಾಗಿತ್ತು. ಭಾನುವಾರ ಬೇರೆ. ಕ್ರಿಕೆಟ್ಟು ಮ್ಯಾಚು ಇದ್ದುದರಿಂದ ಹೊರಗಡೆ ಎಲ್ಲೂ ಕಾಲಿಡುವ ಹಾಗಿಲ್ಲ. ಸೊ, ಪರಿಹಾರೋಪಾಯಕ್ಕಾಗಿ ಯೋಚಿಸತೊಡಗಿದೆ. ರಾಜಿ ಸಂಧಾನವೇ ಅತ್ಯುತ್ತಮ ಮಾರ್ಗವೆಂದು ಅರ್ಧ ಘಂಟೆಯಲ್ಲಿ ಹೊಳೆಯಿತು.( ಬೇರೆ ಮಾರ್ಗವೂ ಇರಲಿಲ್ಲ ಎನ್ನಿ) ನಾನೇ ಮಾತಿಗೆಳೆದೆ.



ಏನಮ್ಮ ಸಂಡೇ ಸ್ಪೆಷಲ್?



ನನ್ನ ತಿಥಿ.! (ಗ್ಯಾರಂಟೀ ಇವರ ಮೂಡು ಸರಿ ಇಲ್ಲ )



ಓಹ್ ಸ್ವೀಟ್. ಆದ್ರೆ ನಾನು ಕೇಳಿದ್ದು ತಿಂಡಿ ಮಮ್ಮಿ.



ಚಿತ್ರಾನ್ನ



ಚಿತ್ರಾನ್ನ!!!!!!!!!!!!!!!!!( ಬಹುಷ; ಇವತ್ತು ನಾನು ಎಡಗಡೆ ಮಗ್ಗುಲಲ್ಲಿ ಎದ್ದನಾ?)



ಮಮ್ಮಿ ಬೇರೆ ಏನಾದ್ರೂ option ?



ಹೂ



ಏನು option ಇದೆ ಮಾಮ್?



ಇನ್ನು ಎರಡು option ಇದೆ.



very nice ಯಾವುದು ಮಮ್ಮಿ ?



ಬೇಕಾದ್ರೆ ತಿನ್ನು, ಬೇಡಾಂದ್ರೆ ಬಿಡು. ಇವೆರೆಡೇ option.



(ನಾನು ಎಡಗಡೆ ಮಗ್ಗುಲಲ್ಲಿ ಎದ್ದಿದ್ದು ಅಂತಾ ಕನಫರ್ಮಾಗಿ ಹೋಯ್ತು. ಆದರೆ ರಾಜಿ ಸಂಧಾನ ಆಗದಿದ್ದರೆ. ಇವತ್ತು ಮನೆ ನರಕ ಆಗುವುದು ಗ್ಯಾರಂಟಿ. ಆದರೆ ಈ ಬ್ಯಾಡ್ ಮೂಡಿಗೆ ಕಾರಣ ಏನು? ಗೊತ್ತಾಗ್ತ ಇಲ್ವಲ್ಲ. ಮತ್ತೆ ನಾನೆ ಮಾತನಾಡಿಸಿದೆ.)



ಯಾಕಮ್ಮಾ ಈ ಸಿಟ್ಟು ನಾನು ನಿನ್ನ ಒಡಹುಟ್ಟಿದ ಕಂದಾ (!?) ಅಲ್ವೇನಮ್ಮಾ.?



( ಈ ನಾಟಕ ಡೈಲಾಗ್ ಯಾಕೊ ವರ್ಕ್ ಔಟ್ ಆಗ್ಲಿಲ್ಲ )



ಅಮ್ಮಾ. ಏನಾಯ್ತು ಅಂತ ಹೇಳೂ. ನಾನು ರಾತ್ರಿ ಎರಡು ಘಂಟೆ ಇಂದ ನೋಡ್ತಾ ಇದೀನಿ. ಮಗನ್ನ ಬೈಯೋ ಟೈಮಾ ಅದು.



( ಈ ಮಾತು ಆಡಿದ ಮೇಲೆ ನನಗೆ ಜ್ನಾನೋದಯವಾಯಿತು.)



ರಾತ್ರಿ ಮನೇಗೆ ಬರೋ ಟೈಮಾ ಅದು.( ನಮ್ಮಮ್ಮನ ಜ್ವಾಲಮುಖಿ ಸ್ಪೋಟವಾಯಿತು) ಅರ್ಧ ಘಂಟೇ , ಕುಳಿತ ಜಾಗದಲ್ಲೇ ಸಹಸ್ರ ನಾಮಾರ್ಚನೆಗಳು (ವಿಥ್ ಮಂತ್ರ ಪುಷ್ಪ ) ಶೋಡಶೋಪಚಾರ ಸೇವೆ ( ವಿಥ್ ಪಾತ್ರೆ ಸೌಂಡು ) ಎಲ್ಲಾ ಆಯಿತು.



ನಾನು ಕಣ್ಣು ಬಿಟ್ಟಾಗ ಮೌನವಾಗಿತ್ತು. ಒಮ್ಮೆ ಸುತ್ತ ಮುತ್ತ ವೀಕ್ಷಿಸಿದಾಗ ಅದು ನಮ್ಮ ಮನೆ ಅಂತ ಗೊತ್ತಾಯಿತು. ಮತ್ತೆ ರಾಜಿ ಮಾಡಿಕೊೞುವ ದುಸ್ಸಾಹಸಕ್ಕೆ ಕೈ ಹಾಕಿದೆ.



ಅದಕ್ಯಾಕಮ್ಮಾ ಇಷ್ಟು ಕೋಪ. ವೀಕೆಂಡ್ ಅಲ್ವಾ? ಪ್ರೆಂಡ್ಸ ಎಲ್ಲಾ ಸಿಕ್ಕಿದ್ರು. ಮಾತಾಡ್ತ ಲೇಟಾಗೋಯ್ತು. ನೋಡಿದ್ರು ವಾಪಸ್ ಬರುವಾಗ ಗಾಡಿ ಬೇರೆ ಕೆಟ್ಟೋಯ್ತು. some time its happens mummy.



ನಾನು ಕುಳಿತ ಜಾಗಕ್ಕೆ ಒಂದು ವಸ್ತು ಬಾಂಬಿನ ತೆರೆದಿ ಬಂದು ಬಿತ್ತು. ಅದೇನೆಂದು ನೋಡುವ ಮೊದಲೇ ಇನ್ನೊಂದು ವಸ್ತು ಅದೇ ಸ್ಟೈಲಿನಲ್ಲಿ ಬಂದು ಮುಖಕ್ಕೆ ಅಪ್ಪಳಿಸಿತು.



ನೋಡಿದರೆ ಒಂದು GOLD FLAKE LIGHTS ಸಿಗರೇಟು. ಒಂದು ಬೆಂಕಿ ಪೊಟ್ಟಣ. ( ನನ್ನ ಹಣೆಬರಹ ಇವತ್ತು ಡಿಸೈಡಾಗಿ ಹೋಯ್ತು )



ಇದು ನನ್ನ ಬ್ರಾಂಡ್!! ಅಲ್ಲಲ್ಲ. ಇದೆಲ್ಲಿ ಸಿಕ್ತಮ್ಮಾ ನಿನಗೆ ?



ನಿನ್ನ ಜರ್ಕಿನ್ ಜೇಬಿನಲ್ಲಿ.



ಅದು ಅಲ್ಲಿ ಹೇಗೆ ಬಂತು ?



ಅದನ್ನೇ ನಾನು ನಿನ್ನನ್ನು ಕೇಳ್ತಾ ಇರೋದು ?



ನಾನು ನಿಜವಾಗಲೂ ಸೇದಲ್ಲಾ ಮಮ್ಮಿ. ನಿನ್ನಾಣೆ



ಥೂ ಅಯೋಗ್ಯ. ನನ್ನ ಪ್ರಾಣ ಯಾಕೆ ತೆಗಿತೀಯಾ.



ನಿಜವಾಗಲೂ ಮಮ್ಮಿ.



ಮತ್ತೆ ರಾತ್ರಿ ನಿನ್ನ ಬಾಯಿಂದ ಹೆಣ ಸುಟ್ಟ ವಾಸನೆ ಬರ್ತಾ ಇತ್ತು? ಹೌದಾ, ಅಲ್ವಾ



( ಥೂ ನಮ್ಮಮ್ಮನಿಗೆ ರಸಿಕತೆ ಅನ್ನೋದೇ ಇಲ್ಲಾ. ಅಂಥಾ ಬ್ಲೆಂಡೆಡ್ ಫ್ಲೇವರ್ ನ್ನು ಯಾವುದಕ್ಕೆ ಹೋಲಿಸ್ತಾ ಇದಾರೆ? ITC ಕಂಪನಿಯವರು ಕೇಳಿಸಿಕೊಂಡಿದ್ರೆ ನೇಣು ಹಾಕಿಕೊಂಡಿರೋರು)



ಮಮ್ಮಿ ಅದು.............



ನಿಜ ಬೊಗಳೊ. ಸೇದುತ್ಯಾ ಇಲ್ವಾ.



(ರೆಡ್ ಹ್ಯಾಂಡಾಗಿ ಸೀಸಾದ ಮೇಲೆ ಯಾವ ಲಾಯರ್ ಏನು ಮಾಡ್ತಾನೆ. ಇನ್ನೂ ಮುಚ್ಚಿಟ್ಟರೆ , ನಮ್ಮಮ್ಮನ ಪ್ರೆಷರ್ ಏರುತ್ತಾ ಹೋಗತ್ತೆ. ಪೂರ್ತಿ ಮುಳುಗಿದವನಿಗೆ ಚಳಿಯೇನು? ಮಳೆಯೇನು? so ಸರೆಂಡರ್ ಆದರೆ ಶಿಕ್ಷೆ ಕಡಿಮೆ ಆಗಬಹುದು)



ಅದು ಹುಡುಗ್ರೆಲ್ಲಾ ಬಲವಂತ ಮಾಡಿದ್ರು. ಅದಕ್ಕೆ................ಒಂದೇ ಒಂದು...............



(ಈ ಬಾರಿ ಬಾಂಬು ಸ್ಪೋಟವಾಯಿತು.)



ಮಕ್ಕಳಿಗೆ ತಾಯಿ ಇರಬಾರ್ದಂತೆ. ಹಸುಗೆ ಕರು ಇರಬಾರ್ದಂತೆ.ನಾನು ಸತ್ತಿದ್ರೆ ನಿಮಗೆ ಬುದ್ದಿ ಬಂದಿರೋದು. ಇಷ್ಟು ಚಿಕ್ಕ ವಯಸ್ಸಿಗೆ ಇಂಥಾ ಮನೆಹಾಳ ಅಭ್ಯಾಸಗಳು. ಅದ್ಯಾವ ದರಿದ್ರ ಫ್ರೆಂಡ್ಸೋ ಇದನ್ನೆಲ್ಲಾ ಕಲಿಸೋರು. ಸಿಗರೇಟು ಪ್ಯಾಕಿನ ಮೇಲೆ ನೋಡಿಲ್ವಾ. ಆರೋಗ್ಯಕ್ಕೆ ಹಾನಿಕರ ಅಂತ ಹಾಕಿರ್ತಾರೆ?



ಅದಕ್ಕೆ ಅಮ್ಮಾ ನಾನು ಪ್ಯಾಕೇ ತಗಳಲ್ಲ. ಒಂದೊಂದೇ...........



ಥೂ. ನನ್ನ ಹತ್ರ ಇಂಥಾ ತಮಾಷೆ ಎಲ್ಲಾ ಮಾಡ್ಬೇಡಾ. ಏನೋ ಬರುತ್ತೆ ಸಿಗರೇಟು ಸೇದಿದ್ರೆ?



ಹೊಗೆ



ಹೊಗೆ ಹಾಕಿಸ್ಕೊತಿಯಾ, ಮನೆ ಮುಂದೆ. ನಿಮ್ಮಾವ, ಚಿಕ್ಕಪ್ಪಾ ಎಲ್ಲಾ ನೋಡು ಎಂಥಾ ಸಭ್ಯಸ್ತರು. ಅವರನ್ನಾರೂ ನೋಡಿ ಕಲೀಬಾರ್ದ. ಎಲ್ಲಿಂದ ಬಂತೋ ನಿನಗೆ ಈ ದರಿದ್ರ ಅಭ್ಯಾಸ.



ಅದು ರಕ್ತದಲ್ಲಿ ಬಂದಿರೋದಮ್ಮಾ.



( ನಮ್ಮಮ್ಮನ ಉರಿನೋಟ ಅಲ್ಲೇ ಪೇಪರ್ನಲ್ಲಿ ಮುಖ ಹುದುಗಿಸಿ ಕೂತಿದ್ದ ನಮ್ಮಪ್ಪನ ಮೇಲೆ ಬಿತ್ತು.ಇಷ್ಟು ಹೊತ್ತು ನಮ್ಮಪ್ಪ. ಮೂಕ ಪ್ರೇಕ್ಷಕರಾಗಿ ಒಳಗೊಳಗೇ ನಗುತ್ತಾ ಈ ಪ್ರಹಸನವನ್ನು ವೀಕ್ಷಿಸುತ್ತಿದ್ದರು. ಈ ಆಕಸ್ಮಿಕ ಬೆಳವಣಿಗೆ ನೋಡಿ ಒಮ್ಮೆಗೇ ಬೆವೆತು ಹೋದರು. ನನ್ನಮೇಲೆ ಒಂದು ಕ್ರೂರ ನೋಟ ಬೀರಿ. ಅಲ್ಲಿಂದ ಸಭಾತ್ಯಾಗ ಮಾಡಿಬಿಟ್ಟರು )



ಆ ಸುಬ್ಬು , ಆನಂದ ಈ ಸತಿ ಮನೆಗೆ ಬರಲಿ ಹಲ್ಲು ಕಿರ್ಕೊಂಡು ಆಂಟೀ ಅಂತಾ.



ಮಮ್ಮಿ ಅವರಿಗೇನೂ ಹೇಳ್ಬೇಡಾ. ಅವರೇನೂ ನನಗೆ ಕಲಿಸಲಿಲ್ಲ.



ಮತ್ತೆ



ನಾನೆ ಅವರಿಗೆ. ಇಲ್ಲ ಇಲ್ಲ ಆ ವಿಷಯ ಬಿಡಮ್ಮಾ. ಇನ್ಮೇಲಿಂದಾ ಸೇದಲ್ಲಾ.



ಹೋದ ಸತಿ ಪಕ್ಕದ್ಮನೆ ಶಾರದಾಂಟಿ ನೀನು ಸಿಗರೇಟು ಸೇದೊದು ನೋಡಿ ನಾನು ಬೈದಾಗಲೂ ಹೀಗೆ ಹೇಳಿದ್ದೆ.



ಈ ಸತಿ ನಿಜವಾಗಲೂ ಬಿಡ್ತೀನಿ ಮಮ್ಮಿ.



ಹೌದು. ಜೀವಮಾನ ಎಲ್ಲಾ ಗಂಡಂಗೆ ಬುದ್ದಿ ಹೇಳಿದ್ದಾಯ್ತು. ಈಗ ಮಗನಿಗೆ. ಇಂಥಾ ಜೀವನ ನನ್ನ ಶತ್ರೂಗೂ ಬೇಡಾ. ಅದೇನೂಂತ ಇಂಥ ಗಂಡಾ ಮಕ್ಕಳ್ನಾ ಕಟ್ಕೊಂಡು ಹೆಣಗೋದಕ್ಕಿಂತ. ಆ ಭಗವಂತಾ ನನ್ನ ಕರಿಸ್ಕೊಂಡು ಬಿಟ್ಟಿದ್ರೆ ಚೆನ್ನಾಗಿರೋದು.



( ಈ ರೀತಿಯ ವಾಕ್ಪ್ರಹಾರ ಸುಮಾರು ಒಂದುವರೆ ಘಂಟೆಯ ನಂತರ ಮುಕ್ತಾಯ ವಾಯಿತು . ನನಗೆ ಮೂರ್ಛೆ ಬರುವ ಹಾಗಾಗಿತ್ತು)



೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦



(ಅದಾಗಿ ಸುಮಾರು ಒಂದು ತಿಂಗಳಾದ ಮೇಲೆ ಬೈಕ್ ಓಡಿಸುವಾಗ ಅಪಘಾತವಾಗಿ ಕಾಲಿಗೆ ಏಟಾಯಿತು. ಲಿಗಮೆಂಟ್ ಫಾಕ್ಚರ್ ಅಂತಾ ಡಾಕ್ಟರ್ ನಾಮಕರಣ ಮಾಡಿ ಹದಿನೈದು ದಿನ ಬೆಡ್ ರೆಸ್ಟ್ ಮಾಡುವಂತೆ ಸೂಚಿಸಿದರು. ಮೊದಲ ದಿನ ಹೇಗೋ ಕಳೆದು ಹೋಯ್ತು. ಮಾರನೇ ದಿನ ಸಾಧ್ಯವೇ ಇಲ್ಲದೇ ನಿಧಾನವಾಗಿ ಕುಂಟುತ್ತಾ ಎದ್ದು ನಡೆದು ಕೊಂಡು, ಪಕ್ಕದ ರೋಡಿನಲ್ಲಿದ್ದ ಅಂಗಡಿಗೆ ಹೋಗಿ ಅಗ್ನಿಕಾರ್ಯ ಮುಗಿಸಿಕೊಂಡು ಬಂದೆ)



ರಾತ್ರಿ ಮಲಗುವಾಗ ನಮ್ಮಪ್ಪ ರೂಮಿಗೆ ಬಂದರು



ಹ್ಯಾಗಿದಿಯಪ್ಪಾ ಕಾಲು?



ಪರ್ವಾಗಿಲ್ಲಪ್ಪ. ನೋವು ಸ್ವಲ್ಪ ಕಡಿಮೆ ಆಗಿದೆ. ನಡೆಯೋಕೆ ಕಷ್ಟಾ.



ಮತ್ತೆ ನಿಮ್ಮಮ್ಮ ಹೇಳ್ತಾ ಇದ್ಲು ಮಧ್ಯಾಹ್ನ ಅದೇಲ್ಲೋ ನಡಕೊಂಡೇ ಹೋಗಿದ್ಯಂತೆ?



ಇಲ್ವಲ್ಲಾ?



ಮುಚ್ಚೋ ಬಾಯಿ. ಸುೞು ಬೊಗಳಬೇಡಾ



ಓಹ್ ಅದಾ. ಸುಮ್ನೆ ಕೂತು ಕೂತು ಬೇಜಾರಾಯ್ತು. ಅದಕ್ಕೇ ಒಂದು ವಾಕ್ ಹೋಗಿ ಬಂದೇ.



ಮತ್ತೆ ನಡದ್ರೇ ನೋವಾಗತ್ತೇ ಅಂದೇ?



ಅದು......................



ಮುಟ್ಟಾಳ.ತಗೋ ಅಂತಾ ಜೇಬಿಂದ ಒಂದು ಪ್ಯಾಕ್ GOLD FLAKE LIGHTS ತೆಗೆದು ಕೊಟ್ಟರು.



ಅದೇನು ಹಾಳಾಗ್ತಿಯೋ, ನನ್ನ ಕಣ್ಣ ಮುಂದೇನೇ ಹಾಳಾಗು. ನಿಮ್ಮಮ್ಮಂಗೆ ಹೇಳ್ಬೇಡಾ. ಇಬ್ರದೂ ಗ್ರಹಚಾರ ಬಿಡಿಸ್ತಾಳೆ ಆಮೇಲೆ. ಮೇಲೇ ಟೆರೇಸ್ ಗೆ ಹೋಗಿ...........ಅಯ್ತಾ. ಸುಮ್ನೇ ಅಲ್ಲಿ ಇಲ್ಲಿ ಓಡಾಡಿ ನೋವು ಮಾಡ್ಕೋಬೇಡಾ.



ಸಂಕೋಚದಿಂದ ನನ್ನ ಮನಸ್ಸು ಮುದುಡಿಹೋಗಿತ್ತು. ಹೂ ಅಂದೆ



ಅಡಿಗೆ ಮನೆಯಿಂದ ನಮ್ಮಮ್ಮನ ಹಾಡು ಕೇಳಿಸುತ್ತಿತ್ತು.



"ಕಂದಾ ಬೇಡವೋ ಮಣ್ಣು ತಿನ್ನಬೇಡ



ಕಂದಾ ಬೇಡವೋ ಮಣ್ಣು ತಿನ್ನಬೇಡಾ"

ನನ್ನ ಧಾಟಿಯ ನೀನರಿಯೆ, ನನ್ನ ಹಾಡೇ ಬೇರೆ!

"ಹೇಳು, ಈಗೇನ್ಮಾಡಣಾಂತ ಅಂದ್ಕೊಂಡಿದೀಯಾ?" ಮೌನದ ಕೊಳಕ್ಕೆ ಥಟ್ಟನೆ ಮಾತಿನ ಕಲ್ಲೆಸೆದಳು.



ಒಂದು ಕ್ಷಣ ಏನು ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಮತ್ತೆ ಮೌನಕ್ಕೆ ಶರಣಾಗಿ ಇನ್ನೊಂದು ಸಿಗರೇಟು ಹಚ್ಚಿದೆ. ಅವಳು ನಕ್ಷತ್ರಗಳ ಬಗ್ಗೆ ಅಭ್ಯಾಸ ಮಾಡುತ್ತಾ ನಿಂತುಕೊಂಡಳು,.



ನಮ್ಮಿಬ್ಬರ ಗೆಳೆತನ ಸುಮಾರು ಒಂದೂವರೆ ವರ್ಷದ್ದು. ಆಫೀಸಿನಲ್ಲಿ ಪರಿಚಯವಾಗಿ, ಕಾಫಿ ಡೇನಲ್ಲಿ ಗಾಢವಾಗಿ, ಮಲ್ಲೇಶ್ವರಂನ ನಿರ್ಜನ ಬೀದಿಗಳಲ್ಲಿ ಆಪ್ತವಾಗಿ, ಈಗ ನಾವು ಬರೀ ಫ್ರೆಂಡ್ಸು ಎಂದರೆ ಸ್ಯಾಂಕಿ ಟ್ಯಾಂಕಿನ ಬಳಿ ಕೞೇಕಾಯಿ ಮಾರುವವನೂ ಕೂಡ ನಂಬುತ್ತಿರಲಿಲ್ಲ.



ಆದರೇನೋ ಗೊತ್ತಿಲ್ಲ. ಇದ್ದಕ್ಕಿದ್ದಂತೇ ನಮ್ಮ ಮೇಡಮ್ಮು ನಮ್ಮನ್ನು ಅವಾಯ್ಡು ಮಾಡಲು ಶುರು ಮಾಡಿದರು. ಯಾವಾಗ ಕೇಳಿದರೂ, ಈಗ ನಾನು ಸ್ವಲ್ಪ ಬ್ಯುಸಿ, ಇಲ್ಲ ನಾಳೆ ಸಿಗೊಕ್ಕಾಗಲ್ಲ, ನಾನು ಭಾನುವಾರ ಮನೆಯವರ ಜೊತೆ ಹೊರಗೆ ಹೋಗ್ತಾ ಇದ್ದಿನಿ. ಇತ್ಯಾದಿ ಇತ್ಯಾದಿ. ನಾನು ಕೂಡ ನೋಡುವಷ್ಟು ನೋಡಿ, ಕೊನೆಗೆ ಇನ್ನುಮುಂದೆ ನಿರ್ಲಕ್ಷಿಸಬೇಕು ಅಂದು ಕೊಂಡೆ. ಆದರೆ ನಿರ್ಲಕ್ಷಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇಬ್ಬರಿಗೂ!



ಸರಿ ಒಮ್ಮೆ ಇಬ್ಬರೂ ಕೂತು ಬಗೆಹರಿಸಿಕೊೞದಿದ್ದರೆ, ನನ್ನ ಸಿಗರೇಟು ಖರ್ಚು ಮತ್ತು ಅವಳ ಕರ್ಚೀಫು ಕರ್ಚು ಎರಡೂ ಬಜೆಟ್ಟು ಮೀರುವುದೆಂದು ಜ್ನಾನೋದಯವಾಗಿ, ಒಮ್ಮೆ ಅವಳು ಆಫೀಸಿನಲ್ಲಿ ಎದುರಾದಾಗ ಸಾಯಂಕಾಲ ಮಾಮೂಲಿ ಜಾಗದಲ್ಲಿ ಸಿಗಲು ಹೇಳಿದಳು. ನಾನೂ ಮರುಮಾತನಾಡದೇ ಒಪ್ಪಿಕೊಂಡೆ.



ಸರಿ. ಕರೆದಿರುವವಳು ಅವಳು. ಅವಳೇ ಮಾತು ಶುರುಮಾಡಲಿ ಅಂತ ನಾನು ಸುಮ್ಮನಿದ್ದೆ.



"ಸರಿ ಇನ್ನು ಹೊರಡೋಣ" ಎಂದಳು.



"ಆಯ್ತು, ನಾನು ಬೈಕ್ ತೆಗೆದುಕೊಂಡು ಬರ್ತೀನಿ. ನೀನಿಲ್ಲೇ ನಿಂತಿರು" ಎಂದೆ



"ನಾನ್ಯಾಕೆ ಕರೆದಿದ್ದು ಕೇಳಲ್ವಾ?"



"ಹೇಳೋ ಹಾಗಿದ್ರೆ ಇಷ್ಟು ಹೊತ್ತೂ ಏನು ಗೆಣಸು ಕೆತ್ತುತ್ತಾ ಇದ್ರಾ"



ಇದ್ದಕ್ಕಿದ್ದಂತೆ ಕಣ್ಣಲ್ಲಿ ಗಂಗಾ-ಭಾಗೀರಥಿ ಪ್ರತ್ಯಕ್ಷವಾಗಿ ಹರಿಯಲಾರಂಭಿಸಿತು. ಈ ಹುಡುಗೀರಿಗೆ ಅಳು ಅನ್ನುವುದು ಒಂಥರಾ ಸಮಯಕ್ಕೊದಗುವ ದೇವರು. ಅದನ್ನು ಅವರು ಯಾವ ರೀತಿ ಬೇಕಾದರೂ ಬಳಸಿಕೊೞಬಹುದು.



"ಈಗೇನಾಯ್ತೂಂತಾ" ನಾನು ಸಿಡುಕಿದೆ



"ಹೌದು, ನಿನಗೆ ನಾನು ಸತ್ರೆಷ್ಟು ,ಇದ್ರೆಷ್ಟು? ನೀನಾಯ್ತು, ನಿನ್ನ ದರಿದ್ರ ಫ್ರೆಂಡ್ಸಾಯ್ತು. ಬಿಟ್ರೆ ಆ ಸುಡುಗಾಡು ಆಫೀಸು. ನಿಂಗೆ ನೆನಪಿದ್ಯಾ? ನೀನಾಗೆ ನೀನು ನನಗೆ ಫೋನ್ ಮಾಡಿ ಎಷ್ಟು ದಿನಾ ಆಯ್ತು ಅಂತಾ. ಹೋಗ್ಲಿ ನನ್ನ ಮನೇಗೆ ಡ್ರಾಪ್ ಮಾಡಿ ಎಷ್ಟು ದಿನಾ ಆಯ್ತು ಅಂತ ಗೊತ್ತಾ. ಯಾಕ್ ಹೀಗ್ ಮಾಡ್ತಾ ಇದ್ಯಾ?" ಒಂದೇ ಸರ್ತಿ ಜಡಿಮಳೇ ಬಂದು ನಿಂತಂತಾಯ್ತು.



"ಹೌದು. ನಾನು ಕಾಲ್ ಮಾಡ್ಲಿಲ್ಲಾ. ಡ್ರಾಪ್ ಕೊಡ್ತೀನಿ ಬಾ ಅಂತಾ ಕರೀಲಿಲ್ಲಾ. ನಿಜ ತಪ್ಪಾಯ್ತು. ಆದ್ರೆ ನೀನೇ ಫೋನ್ ಮಾಡಬಹುದಿತ್ತಲ್ಲಾ? ನೀನೆ, ಬಾ ಇವತ್ತು ನನ್ನ ಡ್ರಾಪ್ ಮಾಡು ಅಂತಾ ಕೇಳ ಬಹುದಿತ್ತಲ್ಲಾ?"



"ದರಿದ್ರ ಈಗೋ ನಿಂದು, ಮೊನ್ನೆ ಆ ಹೊಸ cs ರಮ್ಯಾ ಜೊತೆ, ಅದೇನ್ ಕಿಸಿತಾ ನಿಂತಿದ್ದೆ. ಅವಳಿಗೆ ಒಂದಿನಾ ಮನೇಗೂ ಡ್ರಾಪ್ ಮಾಡಿದ್ಯಂತೆ"



"ಓಹೋ! ಇದಾ ಮ್ಯಾಟರು. ಕೊಂಕಣಾ ಸುತ್ತಿ ಮೈಲಾರಕ್ಕೆ ಬಂದಗಾಯ್ತು. ಈ ಮಾತು ಮೊದಲೇ ಕೇಳ ಬಹುದಿತ್ತಲ್ಲಾ?"



"ಈಗ್ಲಾದ್ರೂ ಬೊಗಳು"



"ಬೌ ವೌ ಬೌಬೌ"



" ತಮಾಷೇ ಸಾಕು, ಹೇಳು"



"ನೋಡು ನೀನು ಅಂದ್ಕೊಂಡ ಹಾಗೆ ಏನೂ ಇಲ್ಲ. ಹೊಸದಾಗಿ ಬಂದಿರೋದ್ರಿಂದಾ ಅವಳಿಗೆ ಟ್ರೈನ್ ಮಾಡ್ತಾ ಇದ್ದೆ ಅಷ್ಟೇ"



"ಮತ್ತೆ ಡ್ರಾಪು ಕೊಟ್ಟಿದ್ದು"



" ಅವರಮ್ಮ ಅವತ್ತು ರಾಮಯ್ಯ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ರು. ಅರ್ಜೆಂಟಾಗಿ AB+ ಬ್ಲಡ್ ಬೇಕಾಗಿತ್ತಂತೆ. ನನ್ನತ್ರ ಬಂದು ರಿಕ್ವೆಸ್ಟ್ ಮಾಡಿಕೊಂಡ್ಲು. ನಂದೂ ಅದೇ ಆಗಿರೋದ್ರಿಂದಾ ಡೊನೇಟ್ ಮಾಡೋದಿಕ್ಕೆ ಹೋಗಿದ್ದೆ."



"ನಿಜ್ವಾಗ್ಲೂ"



"ಬೇಕಾದ್ರೆ ಆವತ್ತಿನ ಡೇಟ್ ನಲ್ಲಿರೋ ಡಾನರ್ ಸರ್ಟಿಫಿಕೇಟ್ ತೋರಿಸ್ತೀನಿ"



"ಐ ಆಂ ಸಾರಿ"



" ಇರಲಿ ಬಿಡು. ಇದೇನೂ ಹೊಸದಲ್ಲಾ ನಂಗೆ. ನೀನು ಇಷ್ಟೆಲ್ಲಾ ನೋವು ಕೊಟ್ಟು. ನೋವು ಅನುಭವಿಸಿ ನರಳೋದಕ್ಕಿಂತಾ ನನ್ನ ಹತ್ರ ಕ್ಲಾರಿಫೈ ಮಾಡ್ಕೊಂಡಿದ್ರೆ ಚೆನ್ನಾಗಿರೋದು"



"ಅಷ್ಟೇ ಅಲ್ಲಾ. ನಂದಿನ್ನು ಸುಮಾರು ಕಂಪ್ಲೇಟ್ಸ್ ಇವೆ"



ಒಮ್ಮೆ ಸುಮ್ಮನೆ ವಾಚು ನೋಡಿಕೊಂಡೆ. ಜ್ವಾಲಾ ಮುಖಿ ಮತ್ತೆ ಸ್ಪೋಟಿಸಿತು



" ಪ್ರತಿ ದಿನಾ ಆದ್ರೆ ರಾತ್ರಿ ಹತ್ತು ಘಂಟೆವರೆಗೂ ಆಫೀಸಿನಲ್ಲಿ ಬಿದ್ದಿರ್ತಿಯಾ, ನಾನು ಜೊತೆ ಇರ್ಬೇಕಾದ್ರೆ ಮಾತ್ರ ನಿಂಗೆ ಟೈಮಾಗುತ್ತೆ. ಅಲ್ವಾ?"



"ನೋಡು, ನಾನು ಬೇಕಾದ್ರೆ ರಾತ್ರಿ ಪೂರ್ತಿ ನಿನ್ನ ಮುಖಾ ನೋಡ್ತಾ ಕೂತಿರ್ತೀನಿ. ಆದ್ರೆ ನನ್ನ ಕೆಲಸದ ಬಗ್ಗೆ ಮಾತ್ರ ಮಾತಾಡಬೇಡಾ"



"ಯಾವಾಗ ಕೇಳಿದ್ರೂ ಹೀಗೆ ಸಿಡುಕ್ತ್ಯಾ., ಪ್ರತೀ ತಿಂಗಳೂ ಆ ಬುಕ್ಸಿಗೆ ಸಾವಿರಾರು ರುಪಾಯಿ ಸುರಿತಿಯಾ. ನಂಗೊಂದು ಜಾಕ್ಲೇಟ್ ತಂಕೊಡು ಅಂದ್ರೆ ಮರ್ತೋಯ್ತು ಅಂತ್ಯಾ"



"ಈಗೇನು? ನಿಂಗೆ ಚಾಕ್ಲೇಟ್ ತಾನೇ ಬೇಕು. ಬಾ ನಿನ್ನೆ ತಾನೆ ಸ್ಯಾಲರಿ ಆಗಿದೆ. ನಿಂಗೆ ಚಾಕ್ಲೇಟಿನಲ್ಲೇ ತುಲಾಭಾರ ಮಾಡಸ್ತೀನಿ"



"ಅತ್ತು ಕರೆದು ಔತಣಕ್ಕೆ ಹೇಳಿಸ್ಕೊಂಡಿದ್ರಂತೆ"



ನನಗೆ ಅಸಹನೆ ಹೆಚ್ಚುತ್ತ ಹೋಯ್ತು. ಪ್ಯಾಕಿನಿಂದ ಸಿಗರೇಟು ಹೊರಗೆಳೆದು ಅಂಟಿಸಿಕೊಂಡೆ.



"ನೋಡು, ನೋಡು, ಇನ್ನು ಹದಿನೈದು ದಿನದಲ್ಲೇ ಸಿಗರೇಟು ಬಿಟ್ಬಿಡ್ತೀನಿ ಅಂತ ನನ್ನಮೇಲೆ ಆಣೆ ಮಾಡಿ ಎಂಟು ತಿಂಗಳಾಯ್ತು ಅಲ್ಲಲ್ಲ ಒಂಬತ್ತು ಈ ಮಾರ್ಚ್ ಕಳೆದ್ರೆ. ಭಾನುವಾರ ಪಿವಿಆರ್ ಗೆ ಕರೆದ್ರೆ, ಸುಮ್ನೆ ದುಡ್ಡು ದಂಡಾ. ವೀಕ್ ಡೇಸ್ ನಲ್ಲಿ ಹೋಗೋಣ ಅಂತ್ಯಾ. ತಿಂಗಳಿಗೆ ಸಾವಿರಾರು ರುಪಾಯಿ ಸುಟ್ಟು ಬೂದಿ ಮಾಡ್ತ್ಯಲ್ಲಾ, ನಾಚ್ಕೆ ಆಗಲ್ವಾ?"



ಇಲ್ಲಿಗೆ ನನ್ನ ಸಹನೆಯ ಕಟ್ಟೆ ಒಡೆದು ಹೋಯ್ತು.



"ನೋಡಿ ಮಿಸ್............ ನಾನು ನಿಮಗೆ ಪರಿಚಯವಾದಾಗ ನಾನು ಸಿಗರೇಟು ಸೇದೋದು, ಬುಕ್ಸ್ ಓದೋದು, ಫಿಲ್ಮ್ ನೋಡಿದ್ರೆ ತಲೆನೋವು ಬರೋದು, ಸಾಕಷ್ಟು ಪೋಲಿಪ್ರೆಂಡ್ಸ್ ಇರೋದು, ಎಲ್ಲಾ ನಿಮಗೆ ಗೊತ್ತಿತ್ತು ತಾನೆ?"



"ಗೊತ್ತಿತ್ತು"



"ಹಾಗಿದ್ರಿ ಕೇಳೀ. ನಾನು ಸರ್ವಗುಣ ಸಂಪನ್ನನ ಥರಾ ಆಕ್ಟ್ ಮಾಡಿ ನಿಮ್ಮನ್ನು ಪಟಾಯಿಸಿಕೊೞಲಿಲ್ಲ"



" ನಾನು ಹಾಗೆ ಹೇಳಲಿಲ್ಲ"



"ಮಧ್ಯೆ ಮಾತಾಡ್ಬೇಡಾ, ಪೂರ್ತಿ ಹೇಳೂವರೆಗೂ ಕೇಳು. ನನಗೆ ನನ್ನದೂ ಅಂತಾ ಒಂದು ಪರ್ಸನಲ್ ಲೈಫ್ ಇದೆ. ಅದ್ರಲ್ಲಿ ಸ್ವಂತ ನಮ್ಮ ಮನೆಯವರೂ ಕೂಡ ಇಂಟರ್ಫಿಯರ್ ಆಗೋದು ನನಗೆ ಹಿಡಿಸೋಲ್ಲ. ಈ ಬುಕ್ಸು, ಫ್ರೆಂಡ್ಸು, ಗಿಟಾರು, ಮ್ಯೂಸಿಕ್, ಸಿಗರೇಟು ಎಲ್ಲಾ ನನ್ನ ಜೀವನದ ಭಾಗಗಳು. ಹಾಗಂತ ಇವಿಷ್ಟೇ ನನ್ನ ಜೀವನ ಅಲ್ಲ. ಆಫ್ ಕೋರ್ಸ್ ನೀನೂ ಕೂಡಾ ನನ್ನ ಜೀವನದ ಒಂದು ಭಾಗ ಅಷ್ಟೇ. ಇದ್ರಲ್ಲೆಲ್ಲಾ ನೀನು ತಲೆ ತೂರ್ಸೋದು ನನಗೆ ಹಿಡಿಸೋಲ್ಲ. ಇದೆಲ್ಲಾ ನಿನಗೆ ಮೊದಲೇ ಗೊತ್ತಿದ್ದರೂ ಯಾಕೆ ನಂಗೆ ಕ್ಲೋಸಾದೆ? ಇಂಥಾ ದರಿದ್ರ ವ್ಯಕ್ತಿತ್ವದ ಜೊತೆ ಇದ್ದೂ ನನ್ನ ಸಹಿಸಿಕೊೞೋ ಹಾಗಿದ್ರಿ ಇರು. ಇಲ್ಲಾಂದ್ರೆ ಸುಮ್ನೇ ಮೊದಲಿನ ಥರಾ ಫ್ರೆಂಡ್ಸ್ ಆಗಿರೋಣ್"



ಉಸಿರೆಳೆದು ಕೊಂಡೆ. ಅವಳ ಮುಖ ನೋಡಿದೆ. ಅವಳು ಗುಟ್ಟು ಬಿಟ್ಟು ಕೊಡಲಿಲ್ಲ



ಅಷ್ಟರಲ್ಲಿ . ರೋಸೂವು..........ರೋಸೂವು ಅನ್ನುತ್ತಾ ಗುಲಾಬಿ ಹೂಗಳನ್ನು ಮಾರುತ್ತಾ ಚಿಕ್ಕ ಹುಡುಗನೊಬ್ಬ ನನ್ನ ಹತ್ತಿರ ಬಂದ. ನನ್ನನ್ನು ನೋಡಿ ಪರಿಚಯದ ನಗೆ ನಕ್ಕ. ರೋಸುವ್ ಕೊಡ್ಲಾ ಸಾರ್? ಅಂತ ನನ್ನ ಬಳಿ ಕೇಳಿದ. ನಾನೊಮ್ಮೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ.



"ಕೊಡು, ದುಡ್ಡು ಅವರತ್ರ ಇಸ್ಕೋ" ಅಂದ್ಲು



ರೋಸೂವು ಅವಳ ಕಂಗಳಲ್ಲಿ ಅರಳಿ, ಕೆನ್ನೆಯಲ್ಲಿ ನಗುತ್ತಿತ್ತು

ವಸಂತಾಗಮನವೆಂಬ ಸವೆದು ಹೋದ ಕ್ಲೀಷೆ!

ಏಪ್ರಿಲ್ ಇಸ್ ದಿ ಕ್ರುಯೆಲೆಸ್ಟ್ ಮಂತ್! ಅಂತಾ ಎಲ್ಲೋ ಓದಿದ ನೆನಪು.



ನಿದ್ರಾಹೀನ ರಾತ್ರಿಗಳು. ತೂಕಡಿಕೆಯ ಮುಂಜಾವು. ಆದರೆ ಮುಂಜಾನೆಯಲ್ಲಿ ನಿದ್ರಿಸುವ ಹಾಗಿಲ್ಲ. ಎಲ್ಲಿ ಜನರೆಲ್ಲ ನಮ್ಮನ್ನು ಓವರ್ ಟೇಕ್ ಮಾಡಿಬಿಡುತ್ತಾರೋ? ಎಂಬ ಭಯದಲ್ಲಿ ಅದೇ ಕೆಲಸ, ವ್ಯವಹಾರಗಳಲ್ಲಿ ತೊಡಗಿಕೊೞಲೇ ಬೇಕಾದ ಅನಿವಾರ್ಯತೆ.



ಮೇಲೆ ನಿಗಿ ನಿಗೆ ಕೆಂಡ ಚೆಲ್ಲುವ ಕ್ರೂರವಾದ ಮಧ್ಯಾಹ್ನ .ಹೊರಗೆ ಕಾಲಿಟ್ಟರೆ ಧೂಳು, ವಾಹನಗಳ ಹೊಗೆ. ಮೇಲೆ ಸೂರ್ಯನ ಪ್ರತೀಕಾರ. ಸ್ವಲ್ಪ ದೂರ ನಡೆದರೂ ಸರಿ, ಮನೆಗೆ ಬಂದ ತಕ್ಷಣ ಮುಖದಲ್ಲಿ ಚಪ್ಪಲಿಯಲ್ಲಿ ಹೊಡೆಸಿಕೊಂಡವರ ಕಳೆ.



ಮಧ್ಯಾಹ್ನ ನಿಧಾನವಾಗಿ ಸರಿಯುತ್ತಿದ್ದ ಹಾಗೆ ಮತ್ತೆ ಸಂಜೆ. ಮತ್ತದೇ ಸಂಜೆ, ಅದೇ ಬೇಸರ, ಅದೇ ಏಕಾಂತ.



ಥೂ! ಎಂಥಾ ಏಕತಾನತೆ.ಈ ಲೈಫಿಗೆ ನನ್ನ ಎಕ್ಕಡಾ ತಗೊಂಡು ಹೊಡೆಯ. ಎಲ್ಲಾದರೂ ದೂರ ಹೋಗಿಬಿಡಬೇಕು. ಎಲ್ಲಿಗೆ? ಹಿಮಾಲಯ? ಛೇ ಛೇ ವಯಸ್ಸಿನ್ನೂ ಇಪ್ಪತ್ನಾಲ್ಕರ ಆಸುಪಾಸು. ಊಟಿ? ಒಂಟಿಯಾಗಿ ಹೋದರೆ ನೋಡಿದವರು ಕ್ಯಾಕರಿಸಿ ನಕ್ಕಾರು. ಇನ್ನು ಶೃಂಗೇರಿ,ಹೊರನಾಡು,ಕಳಸಗಳೆಲ್ಲೆಲ್ಲಾ ಇದೇ ಬವಣೆ. ಸೆಕೆಯೆಂಬ ಶಾಪ.



ಇಷ್ಟಕ್ಕೂ ಈ ಬೇಸಿಗೆ ಹೀರುತ್ತಿರುವುದು, ನಮ್ಮ ಮೈಯೊಳಗಿನ ಸತ್ವವನ್ನೋ? ನಮ್ಮ ಕ್ರಿಯಾಶೀಲತೆಯನ್ನೋ? ಅಥವಾ ನಮ್ಮ ಜೀವನೋತ್ಸಾಹವನ್ನೋ? ಗೊತ್ತಿಲ್ಲ. ಏನನ್ನೋ ಹೀರುತ್ತಿರುವದಂತೂ ನಿಜ.



ಮೊದಲು ಹೀಗಿರಲಿಲ್ಲ. ವಸಂತವೆಂದರೆ ಕೋಗಿಲೆ ಕುಹೂ, ಹಣ್ಣಿನ ರಾಜ ಮಾವಿನ ಸವಿ, ಎಲ್ಲೆಲ್ಲೂ ಹೊಂಗೆ ಹೂಗಳ ಕಂಪು. ತಣ್ಣಗಿನ ಬೆಂಗಳೂರು , ಬೆಚ್ಚಗಿನ ನೆನಪುಗಳು. ಈಗ ಇದನ್ನೆಲ್ಲಾ ನೆನಪಿಸಿಕೊಂಡರೆ ಅದಕ್ಕೆ ನಾಸ್ಜಾಲಿಯ ಎಂದು ಹೆಸರಿಡುತ್ತಾರೆ ಸೈಕ್ರಿಯಾಟಿಸ್ಟುಗಳು.



ಮಲೆನಾಡಿನ ಲೊಕೇಶನ್ನು, ಧಗಿಧಗಿಸುವ ಮಧ್ಯಾಹ್ನ.ಹೊಂಗೆ ಮರದ ನೆರಳ ಕೆಳಗೆ ಒಂದು ಈಸಿ ಚೇರು. ಕೈಯಲ್ಲಿ ಬೈರಪ್ಪನವರ ಕಾದಂಬರಿ. ಇಚ್ಚೆಯನರಿತು ನಡೆವ ಸಂಗಾತಿ.ಇಂಥದೊಂದು ಕನಸನ್ನು ಬೆಂಗಳೂರೆಂಬ ಕಿರಾತಕ ನಗರದಲ್ಲಿ, ಯಾವುದೋ ಆಫೀಸಿನ ಏಸಿಯಲ್ಲಿ ಕುಳಿತ ಕೆಲಸ ಮಾಡುವ ಅನ್ ಸಾಟಿಸ್ ಫೈಡ್ ಎಮ್ಮೆನ್ಸಿ ನೌಕರರಿಗೆ ವರ್ಣಿಸುವುದಾದರೂ ಹೇಗೆ? ಇವೆರಡರಲ್ಲಿ ನಂದು ಯಾವ ಗ್ರೂಪು. ನಾನು ಕನಸುಗಳನ್ನು ಬೆಂಬತ್ತೀದ್ದೀನೋ ಅಥವಾ ಕನಸುಗಳೇ ನನ್ನನ್ನು ಬೆಂಬತ್ತಿವೆಯೋ?



ಹೇಗೆ ಇರಲಿ. ಇಂಥಾ ದರಿದ್ರ ಕಾಲದಲ್ಲೂ ಐಸಿಯು ವಾರ್ಡಿನ ಆಕ್ಸಿಜನ್ನಿನಂತೆ ಬರುವ ಅಕಾಲಿಕ ಅಶ್ವಿನಿಯೋ ಭರಣಿಯೋ ಮಳೆ. ಓಡಿಹೋಗಿ ತೊಯ್ಯುವಷ್ಟರಲ್ಲಿ ನಿಂತು ಹೋದಾಗ ಆ ಭಗವಂತನ ಮೇಲೆ ಅಸಹಾಯಕ ಸಿಟ್ಟು. ಮತ್ತೆ ಶುರುವಾದರೆ ಕ್ಷಮಾ ಯಾಚನೆ. ಮಣ್ಣಿನ ಗಂಧಕ್ಕೆ ಅರಳುವ ಮೂಗಿನ ಹೊೞೆಗಳು. ರೋಡಿನಲ್ಲಿ ಬೈಕಿನಿಂದ ಕೊಚ್ಚೆ ಹಾರಿಸಿ ಪಾದಾಚಾರಿಗಳ ಶಾಪ ಮತ್ತು ಕೆಸರು ಬಟ್ಟೆ ನೋಡಿದಾಗ ಸಿಗುವ ಅಮ್ಮನ ಬೈಗುಳವೆಂಬ ಬೋನಸ್ಸು. "ಇಂಥಾ ಎರಡು ಮಳೆ ಬಿದ್ರೆ ಮಾವಿನಹಣ್ಣು ಚೀಪಾಗುತ್ತೆ ನೋಡಿ" ಅಂತಾ ಯಾರೋ ದೇಶಾವರಿ ಚರ್ಚೆ ಮಾಡುತ್ತಿದ್ದರೆ, ಒಳಗೊಳಗೇ ಖುಷಿ. ಇದಕ್ಕೆಲ್ಲಾ ಕಳಸವಿಟ್ಟ ಹಾಗೆ ನೆನಪಾಗುವ " ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ "ಎಂಬ ಅನಂತಮೂರ್ತಿಯವರ ಕವನ.ಇನ್ನೊಂದಷ್ಟು ದಿನ ಬದುಕಬಹುದೆಂಬ ಜೀವನ್ಮುಖಿ ಧೋರಣೆ. ಮಾರನೆಯ ದಿನ ತಂಪು ತಂಪು ಮುಂಜಾನೆ. ಥಣ್ಣನೆಯ ಹವೆ.



ಮತ್ತೆ ಅಕಾಲಿಕ ಮಳೆಯಿಂದ ಹೆಚ್ಚಾಗುವ ಸೆಖೆ. ಮೈಯೆಲ್ಲಾ ಅಂಟಂಟಾಗಿ ನಮ್ಮ ದೇಹದ ಮೇಲೆ ನಮಗೇ ರೇಜಿಗೆ. ಥತ್ತೇರಿಕೆ ಅಂತಾ ಅನ್ನಿಸಿಬಿಡುವ ವಾತಾವರಣ. ಹೊರಗೆ ಸಿಗರೇಟು ಸೇದಲು ಹೋದರೆ. ಕಾರ್ಮೋಡದಂಚಿನಲ್ಲೊಂದು ಮಿಂಚು. ಆಫೀಸಿನ ರೋಡು ತುಂಬಾ ಮೈಯೆಲ್ಲಾ ಹೂಬಿಟ್ಟು ನಗುತ್ತಿರುವ ಕೆಂಪು, ನೀಲಿ ಹಳದಿ ಬಣ್ಣದ ತುಲಿಪ್ ಮರಗಳು.







ವಸಂತ ಬಂದ ಋತುಗಳ ರಾಜ. ಎಂದ ಕವಿಯ ಮೇಲೆ ವಿನಾಕಾರಣ ಸಿಟ್ಟು.



ವಸಂತಕ್ಕೊ೦ದು ನಮಸ್ಕಾರ

ತುಂಗಾ

ನಿನಗೆ ಶರಣಾಗದೆ ಬೇರೆ ವಿಧಿಯೇ ಇಲ್ಲ
ಮನದಾಳದೊಳಗೆ ಅನುಮತಿಯಿಲ್ಲದೆ ನುಗ್ಗಿ
ಅಂತರಂಗ ಬಹಿರಂಗವನ್ನೆಲ್ಲ ಗಲಬರಿಸುತ್ತಿದ್ದರೂ
ಇನ್ನೂ ಎನೋ ಒಂದಷ್ಟು ಕೊಳಕು ಉಳಿದಿದೆ
ನೀನೆ ಅಲ್ಲವೇ ತುಂಗಾ?

ಗಂಗಾಸ್ನಾನಂ ತುಂಗಾಪಾನಂ ಎಂಬ ಮಾತೆಲ್ಲ
ಅತಿಶಯೋಕ್ತಿಯೇನಿರಲಿಕ್ಕಿಲ್ಲ,
ನಾಲಿಗೆಗೊಂದಷ್ಟು ಸಿಹಿ, ನೀರನ್ನು ಗುಟುಕರಿಸುತ್ತಿದ್ದ ಹಾಗೇ
ಗಂಟಲಿಗಿಳಿದು,ಹೃದಯವನ್ನೊಮ್ಮೆ ಸುನೀತವಾಗಿ ತಾಕಿ
ಕರುಳಾಳದಲ್ಲೆಲ್ಲೋ ಕದಲಿ ,ಬೆವರಿನಿಂದ
ಮತ್ತೆ ಇನ್ನೂ ಎಲ್ಲೆಲ್ಲಿಂದಲೋ ಹೊರಹೋಗುವಾಗಲೂ
ಎನೋ ಒಂದಷ್ಟು ಬೆಳಗಿ ಹೋಗುವವಳು

ಹುಟ್ಟಿದ್ದು ಶೃಂಗೇರಿ ಎಂಬ ಮಾತು
ಲೋಕಾರೂಡಿಗಷ್ಟೇ ಇರಬೇಕು
ನರಸಿಂಹನ ದಾಡೆಯಿಂದಿಳಿದವಳು,ಪರಶುರಾಮನ
ಪಾಪ ತೊಳೆದವಳು,ಶಂಕರಚಾರ್ಯರಿಗೆ ಅನುಗ್ರಹವಿತ್ತವಳು
ಅಬ್ಬಾ; ತುಸುವೇನಿಲ್ಲ ನಿನ್ನ ಗುಣಗಾನ ಅಥವಾ
ನಮ್ಮ ಹಸ್ತಕ್ಷೇಪಕ್ಕೊಳಗಾದ ಪುರಾಣ

ನಿನ್ನನ್ನು ಸಂಬೋಧಿಸಲು ಒಂದು ಪದವೂ
ನನ್ನ ಬಳಿಯಿಲ್ಲ, ಆದರೂ ನನ್ನ ಪಾಲಿಗೆ
ನೀನು ಬರಿ ತುಂಗೆ ಮಾತ್ರವಲ್ಲ
ತುಂಗೆ, ತುಂಗಕ್ಕ,ತುಂಗಮ್ಮ , ತುಂಗಾ ಸಖಿ

ಮಳೆಗಾಲದಲ್ಲಿ ಕೆಂಪಾಗಿ, ಬೇಸಿಗೆಯಲ್ಲಿ ತಂಪಾಗಿ
ಹರಿದು, ಅಗೋಚರ ಕಾಡು ಮೇಡುಗಳನ್ನೆಲ್ಲಾ ಸುತ್ತಿ
ಅಬ್ಬಿಯೊಳಕ್ಕೆ ಸುರಿದು ಕಿಬ್ಬಿಯೊಳಗೆ ನೊರೆದು
ಹೋಗುವವಳೇ
ಇಬ್ಬನಿ ಬಿದ್ದಾಗ ಮೈದುಂಬಿ
ಬೆಳದಿಂಗಳ ಬೇಗೆಗೆ ಕರಗಿ ಹೋಗುವವಳೇ

ಸಾಗರ ಸೇರುವ ಮುನ್ನ ಒಮ್ಮೆ ನಿನ್ನ ನೋಡಿಕೋ
ನಿನ್ನಲ್ಲಿ ಒಂದುಬಿಂದು ನನ್ನ ಕಣ್ಣೀರು
ಬೆರೆತು ನೀನೇ ನಾನಾಗಿರುವಾಗ
ನಾನ್ಯಾಕೆ ನಿನ್ನನ್ನು ಕರೆಯಬೇಕು
ನಿನಗೆ ಶರಣಾಗದೇ ಬೇರೆ ದಾರಿಯೇ ಇಲ್ಲ